School Experiences / message

  • Rev. Fr Praveen Martis

    ಬದುಕು ಬದಲಾಯಿಸಿದ ಶಾಲೆ


    ನಾವು ಈ ಲೇಖನವನ್ನು ಶಾಲಾ ಮ್ಯಾಗಜೀನ್‌ನಿಂದ ಆರಿಸಿದ್ದೇವೆ


    ಶಂಕರಪುರ ಎಂದರೆ ನಮಗೆ ತಕ್ಷಣಕ್ಕೆ ನೆನಪಾಗುವುದು ಇತಿಹಾಸ ಪ್ರಸಿದ್ಧವಾದ ಘಮ ಘಮಿಸುವ ಮಲ್ಲಿಗೆ ಹೂವು. ಆದರೆ ಅಲ್ಲಿಮಲ್ಲಿಗೆ ಮಾತ್ರ ಇರುವುದಲ್ಲ. ಇತಿಹಾಸ ನಿರ್ಮಿಸಿದ ಶಾಲೆಯೂ ಇದೆ. ಅದೇ ಸೈಂಟ್ ಜೋನ್ಸ್ ಪ್ರೌಢಶಾಲೆ. ಊರೊಂದು ಬೆಳಗುವುದು ಅಲ್ಲೊಂದು ಶಾಲೆ ಇದ್ದಾಗ. ಶಾಲೆ ಅಂದರೆ ಅದು ಕೇವಲ ಕಲ್ಲು, ಮರಳಿನಿಂದ ಮಾಡಿದ ಕಟ್ಟಡವಲ್ಲ. ಶಾಲೆ ಮನುಷ್ಯ ಬದುಕಿನ ಭವಿಷ್ಯದ ಹೆದ್ದಾರಿ. ಒಂದರ್ಥದಲ್ಲಿ ಶಾಲೆಗೂ ಒಂದು ವ್ಯಕ್ತಿತ್ವವಿದೆ. ಸೈಂಟ್ ಜೋನ್ಸ್ ಈ ಪ್ರೌಢಶಾಲೆ ಅದೆಷ್ಟೋ ವಿದ್ಯಾರ್ಥಿಗಳ ಬದುಕಿಗೆ ಉಜ್ವಲ ಬೆಳಕಾಗಿ ಅವರ ಯಶಸ್ಸಿಗೆ ಕಾರಣವಾಗಿದೆ. ಅಂತಹ ಈ ಪ್ರೌಢಶಾಲೆಯು ಇದೀಗ 40 ವರ್ಷಗಳನ್ನು ಪೂರೈಸುತ್ತಿರುವುದು ಐತಿಹಾಸಿಕ ಸಾಧನೆ. ನಾನು ಓದಿದ ಶಾಲೆ ಇದು ಎಂಬ ಹೆಮ್ಮೆ ನನ್ನದು. ಈ ಕಾರಣಕ್ಕಾಗಿ ನಾನು ಸೈಂಟ್ ಜೋನ್ಸ್ ಪ್ರೌಢಶಾಲೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರೆಲ್ಲನ್ನೂ ಹಾರ್ದಿಕವಾಗಿ ಅಭಿನಂದಿಸುತ್ತೇನೆ.

    ನೆನಪುಗಳೆಂದರೆ ಬಿರುಕು ಬಿಟ್ಟ ಮಾಡಿನ ಸಂದಿನಿಂದ ನೆಲ, ಗೋಡೆಗಳಿಗೆ ತೂರಿಬಿಟ್ಟ ಸೂರ್ಯ ರಶ್ಮಿಯಂತೆ. ನನ್ನ ಶಾಲೆಯ ಬಗೆಗಿನ ನನ್ನ ನೆನಪುಗಳು ಹಾಗೆಯೇ. ಒಂದೊಂದಾಗಿ ಹೊರಬಂದು ತೆರೆದುಕೊಳ್ಳುತ್ತದೆ. ಶಂಕರಪುರದ ನನ್ನ ಶಾಲೆ ನನ್ನ ಬದುಕಿನ ಪ್ರಮುಖ ತಿರುವು. ನಾನು ಪ್ರಾಥಮಿಕ ಶಾಲೆಯನ್ನು ಪೂರೈಸಿ ಸೈಂಟ್ ಜೋನ್ಸ್ ಪ್ರೌಢಶಾಲೆಗೆ ಬಂದ ಮೊದ ಮೊದಲ ದಿನಗಳು ನನಗಿನ್ನೂ ನೆನಪಿದೆ. ಓದಿನಲ್ಲಿ ಮುಂದಿದ್ದೆ. ತರಗತಿಯ ಮೊದಲ ಮೂರು ಸ್ಥಾನದಲ್ಲಿ ನಾನು ಯಾವಾಗಲೂ ಇರುತ್ತಿದ್ದೆ. ಹಾಗಿದ್ದರೂ ಗಣಿತ ಮತ್ತು ವಿಜ್ಞಾನ ವಿಷಯಗಳು ನನಗೆ ಸ್ವಲ್ಪ ಕಿರಿಕಿರಿ ಎನಿಸುತ್ತಿತ್ತು. ಆದರೆ ಸೈಂಟ್ ಜೋನ್ಸ್ ಶಾಲೆಯ ಅಧ್ಯಾಪಕರು ಗಣಿತ ಮತ್ತು ವಿಜ್ಞಾನವನ್ನು ನನಗೆ ಸುಲಭವಾಗಿ ಅರ್ಥವಾಗುವಂತೆ ಮಾಡಿದರು. ವಿಜ್ಞಾನವನ್ನು ಅಷ್ಟೊಂದು ಸರಳವಾಗಿ ವಿವರಿಸಲು ಸಾಧ್ಯವಿದೆಯಲ್ಲ ಎಂದು ನಾನು ಇಂದೂ ಬೆರಗಾಗುತ್ತೇನೆ. ವಿಜ್ಞಾನ ಎಂಬುದು ಪುಸ್ತಕದೊಳಗೆ ಶೇಖರಣೆಗೊಂಡ ವಿಶೇಷ ಜ್ಞಾನವಲ್ಲ, ಅದು ನಮ್ಮ ಬದುಕಾಗಿದೆ ಎಂಬ ಸತ್ಯವನ್ನು ಅಂದು ಆ ಶಿಕ್ಷಕರು ಹೇಳಿ ಕೊಟ್ಟಿದ್ದರು. ಇದರಿಂದಾಗಿ ನನಗೆ ವಿಜ್ಞಾನದ ಮೇಲೆ ವಿಶೇಷ ಆಸಕ್ತಿ ಮೂಡಿತು. ನಂತರದ ದಿನಗಳಲ್ಲಿ ವಿಜ್ಞಾನದಲ್ಲಿ ನಾನು ಹೆಚ್ಚು ಅಂಕಗಳನ್ನು ಗಳಿಸಲು ಶಕ್ತನಾದೆ. ನನ್ನ ವಿಜ್ಞಾನದ ಮೇಷ್ಟ್ರಾಗಿದ್ದ ಜೋನ್ ಲೋಬೊ ಅವರು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರು ಒಬ್ಬ ಒಳ್ಳೆಯ ಆಡಳಿತಗಾರರಾಗಿದ್ದರು. ನಮ್ಮೊಂದಿಗೆ ತುಂಬಾ ಪ್ರೀತಿ ಪೂರ್ವಕವಾಗಿದ್ದರು. ಎಲ್ಲರನ್ನು ಸಮಾನವಾಗಿ ಕಾಣುತ್ತಾ, ತಮ್ಮ ಸೌಮ್ಯ ಮಾತುಗಳಿಂದ ಅವರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದ್ದರು. ಗಣಿತವೆಂದರೆ ಆಗಣಿತವಾದ ಭಾವಗಳು ನನ್ನೆದೆಯೊಳಗಿದ್ದವು. ಅವೆಲ್ಲವನ್ನು ಲೆಕ್ಕಹಾಕಿ ನನ್ನ ಬದುಕಿನ ರೇಖಾ ಚಿತ್ರವನ್ನು ಚಿತ್ರಿಸಿದವರು ನನ್ನ ಗಣಿತ ಮೇಷ್ಟ್ರು. ಹೀಗೆ ವಿಜ್ಞಾನ ಮತ್ತು ಗಣಿತದ ಅಧ್ಯಾಪಕರು ನನ್ನೊಳಗೆ ತುಂಬಿದ ಆತ್ಮವಿಶ್ವಾಸದಿಂದಾಗಿಯೇ ನಾನು ಪಿಯು ಶಿಕ್ಷಣದಲ್ಲಿ ವಿಜ್ಞಾನವನ್ನು ಓದಲು ಧೈರ್ಯ ಮಾಡಿದ್ದು,

    ನನ್ನ ಹೈಸ್ಕೂಲ್ ದಿನಗಳಲ್ಲಿ ಇದ್ದ ಇನ್ನೋರ್ವ ಮುಖ್ಯೋಪಾಧ್ಯಾಯರು ಪಿ. ವಿಠಲ ಶೆಣೈ ಅವರು ಮೇಲ್ನೋಟಕ್ಕೆ ಇವರೊಬ್ಬ ಶಿಸ್ತಿನ ಸಿಪಾಯಿಯಂತಿದ್ದರೂ ಅವರಲ್ಲಿ ಆಳವಾದ ಸೂಕ್ಷ್ಮತೆ ಇತ್ತು, ವಿವೇಚನೆ ತುಂಬಿತ್ತು. ಅವರೊಳಗೆ ಒಬ್ಬ ಒಳ್ಳೆಯ ಕಲಾವಿದನೂ ಇದ್ದ. ಅವರು ಉತ್ತಮ ಚಿತ್ರಕಲಾವಿದರಾಗಿದ್ದರು. ಯಾವಾಗಲೂ ತರಗತಿಗೆ ಬಂದು ಮೊದಲು ಬೋರ್ಡ್‌ ಒಂದು ಸುಂದರವಾದ ಚಿತ್ರವನ್ನು ಬಿಡಿಸಿ ಬಳಿಕ ನಮ್ಮಲ್ಲಿ ಬಿಡಿಸಲು ಹೇಳುತ್ತಿದ್ದರು ಚಿತ್ರ ಬಿಡಿಸುವುದು ಹೇಗೆಂದು ತಿಳಿಯದಿದ್ದ, ಸೃಜನಶೀಲತೆಯ

    ಗಂಧ-ಗಾಳಿ ಇಲ್ಲದಿದ್ದ ನನಗೆ ಇದೊಂದು ತಲೆನೋವಿನ ವಿಷಯವಾಗಿತ್ತು. ಆದರೆ ನಿಧಾನಕ್ಕೆ ಚಿತ್ರ ಬಿಡಿಸುವ ಕಲೆಯನ್ನು ನಾನು ಅರ್ಥ ಮಾಡಿಕೊಂಡೆ ಆನರಿಂದಾಗಿ ಸೃಜನಶೀಲತೆಯ ಪ್ರಾಮುಖ್ಯತೆ ಏನೆಂದು ನನಗೆ ಗೊತ್ತಾಯಿತು. ಹೊಸದಾಗಿ ಯೋಚಿಸುವ, ಹೊಸ ದರ್ಶನ-ಕಾಣೆಯನ್ನು ಕಾಣಲು ನನಗೆ ಹೇಳಿಕೊಟ್ಟದ್ದೇ ಆ ನನ್ನ ಮುಖ್ಯೋಪಾಧ್ಯಾಯರು. ಒಬ್ಬ ಶಿಸ್ತಿನ ಆಡಳಿತಗಾರರಾಗಿದ್ದುಕೊಂಡು ಅವರು ಕೇವಲ ಹೇಳುತ್ತಿದ್ದದ್ದಲ್ಲ. ಅವರೇ ಎಲ್ಲವನ್ನೂ ಮಾಡಿ ತೋರಿಸುತ್ತಿದ್ದರು.


    ಮಳೆಗಾಲದಲ್ಲಿ ಹೊರಾಂಗಣ ಆಟ ಸಾಧ್ಯವಾಗದಿದ್ದಾಗ ನಮ್ಮ ಪಿಟಿ ಮೇಷ್ಟು ನಮಗೆಲ್ಲ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದರು. ರಸಪ್ರಶ್ನೆಯಲ್ಲಿ ಚುಹಾಗೆ ಸರಿಯ ಮಾಡಲು ಅವರು ನಮಗೆಲ್ಲ ಗ್ರಂಥಾಲಯದಿಂದ ಪುಸ್ತಕಗಳನ್ನು ತಂದು ಓದುವಂತೆ ಹುರಿದುಂಬಿಸುತ್ತಿದ್ದರು. ಅಂದು ಆ ಮೇಷ್ಟ್ರು ಲೈಬ್ರೆರಿಯಿಂದ ಪುಸ್ತಕವನ್ನು ತಂದು ಓದುವಂತೆ ಹೇಳಿದ್ದರಿಂದ ಇಂದೂ ನಾನು ಪುಸ್ತಕವನ್ನು ಓದುವುದನ್ನು ಬಿಟ್ಟಿಲ್ಲ. ದೂರದೂರಿಗೆ ಪಯಣಿಸುವಾಗಲೂ ನನ್ನ ಬ್ಯಾಗಲ್ಲಿ ಕನಿಷ್ಠ ಎರಡು ಪುಸ್ತಕಗಳಿರುತ್ತವೆ.


    ಸೈಂಟ್ ಜೋನ್ಸ್ ಪ್ರೌಢಶಾಲೆಯ ಕನ್ನಡ, ಇಂಗ್ಲಿಷ್, ಹಿಂದಿ ಶಿಕ್ಷಕರು ನನ್ನಲ್ಲಿ ಭಾಷಾ ಪ್ರೌಢಿಮೆ ಹೆಚ್ಚಾಗಲು ಕಾರಣರಾದವರು. ಭೂಗೋಳಶಾಸ್ತ್ರದ ಅಧ್ಯಾಪಕರು ನಮ್ಮ ಸುತ್ತುವರಿದಿರುವ ಭೌತಿಕ ಪ್ರಪಂಚದತರ್ಕವನ್ನು ಮನಮುಟ್ಟುವಂತೆ ವಿವರಿಸುತ್ತಿದ್ದರು. ಸಮಾಜಶಾಸ್ತ್ರದ ತರಗತಿಗಳು ನನ್ನ ಚಾರಿತ್ರಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದವು. ಹೀಗೆ ಸೈಂಟ್ ಜೋನ್ಸ್ ಪ್ರೌಢಶಾಲೆಯಲ್ಲಿ ನನಗೆ ಸಿಕ್ಕ ಉತ್ತಮಶಿಕ್ಷಕರು ಮತ್ತು ಶಿಕ್ಷಣದಿಂದಾಗಿ ನನ್ನಲ್ಲಿ ಉನ್ನತ ವ್ಯಾಸಂಗದ ಕನಸೊಡೆಯಿತು. ಸಂಶೋಧನೆಯ ಕಡೆಗೆ ನಾನು ವಾಲುವಂತಾಯಿತು. ಹಾಗೆಯೇ ಇಲ್ಲಿನ ಶಿಕ್ಷಣ ನನ್ನ ಮುಂದಿನ ಓದಿಗೆ ಭದ್ರ ಬುನಾದಿಯಾಯಿತು. ಕಷ್ಟವೆನಿಸಿದ್ದ ವಿಷಯಗಳನ್ನು ಸುಲಭವಾಗಿ ಕಲಿಯಬಹುದು ಎಂದು ತೋರಿಸಿಕೊಟ್ಟು, ನನ್ನಲ್ಲಿ ಅರಿವಿನ ಹರಹನ್ನು ವಿಸ್ತಾರಗೊಳಿಸಿದ ಸೈಂಟ್ ಜೋನ್ಸ್ ಪ್ರೌಢಶಾಲೆಯ ನನ್ನ ಎಲ್ಲಾ ಮೇಷ್ಟಿಗೆ ನಾನಿಂದು ಋಣಿಯಾಗಿದ್ದೇನೆ.


    ಶಂಕರಪುರದ ಈ ಶಾಲೆ ನನ್ನಜ್ಞಾನದ ಹಸಿವನ್ನು ತೀರಿಸುವುದರ ಜೊತೆಗೆ ನನ್ನ ಸರ್ವಾಂಗೀಣ ಬೆಳವಣಿಗೆಗೆ ಸಹಾಯಕವಾಯಿತು. ಆಟೋಟಗಳಲ್ಲಿ ನನ್ನನ್ನು ನಾನು ಹೆಚ್ಚು ತೊಡಗಿಸಿಕೊಳ್ಳುವಂತೆ ಪಿಟಿ ಶಿಕ್ಷಕರು ನನಗೆ ಉತ್ತೇಜನವನ್ನು ನೀಡುತ್ತಿದ್ದರು. ವಿಶಾಲವಾದ ಆಟದ ಮೈದಾನ ನಮ್ಮ ಶಾಲೆಯಲ್ಲಿದ್ದ ದೊಡ್ಡ ಸವಲತ್ತು ಆಗಿತ್ತು. ಅಲ್ಲಿ ನಾನು ದಿನಾ ಸಂಜೆ ಬೇರೆ ಬೇರೆ ಆಟವಾಡುತ್ತಿದ್ದೆ.


    ಸದಾ ಎಳೆಯ ಮನಸ್ಸಿಗೆ ಹತ್ತಿರವಾಗಿ, ಅವರಲ್ಲಿ ಮಾನವೀಯತೆಯ ಬೀಜವನ್ನು, ಸಾಮಾಜಿಕ ಮೌಲ್ಯವನ್ನು ತುಂಬುತ್ತಿದ್ದ ಸೈಂಟ್ ಜೋನ್ಸ್ ಶಾಲೆಯ ಪ್ರತಿಯೊಬ್ಬ ಮೇಷ್ಟ್ರುಗಳಿಗೂ ಮಕ್ಕಳೆಂದರೆ ಯಾರದೋ ಮಕ್ಕಳಾಗಿರಲಿಲ್ಲ. ಎಲ್ಲರೂ ಅವರ ಮನೆಯವರೇ ಆಗಿದ್ದರು. ಪ್ರೀತಿ ತುಂಬಿದ ಸೌಮ್ಯವಾದ ನಡೆ-ನುಡಿಗಳಿಂದ ಅವರು ನಮ್ಮನ್ನು ಸೆಳೆಯುತ್ತಿದ್ದರು. ಶಾಲೆ ಮತ್ತು ಕೆಲಸದ ಬಗೆಗಿನ ಅವರ ಬದ್ಧತೆ, ಸಮಯ ಪರಿಪಾಲನೆ, ಸಚ್ಚಾರಿತ್ರ್ಯ, ಎಲ್ಲವೂ ಅನುಸರಣೀಯ ಮತ್ತು ಅನುಕರಣೀಯವಾಗಿತ್ತು. ಶಿಸ್ತು ಎಂಬ ಜವಾಬ್ದಾರಿ ನಮ್ಮಲ್ಲಿ ತನ್ನಿಂದ ತಾನೇ ಮೂಡಿಬರುವಂತೆ ಪ್ರೇರಕ ಶಕ್ತಿಯಾಗಿದ್ದರು. ಶ್ರೇಷ್ಠ ಜೀವನ ಮೌಲ್ಯಗಳ ಬಗ್ಗೆ ಮಾತನಾಡದೆ ಅವರೇ ನಮಗೆಲ್ಲ ನಿದರ್ಶನವಾಗಿ ನಮಗೆ ಕಾಣುತ್ತಿದ್ದರು.


    ಇಂದು ನಾನು ಈ ಜಿಲ್ಲೆಯ ಅತ್ಯಂತ ಪ್ರಾಚೀನ ಮಹಾವಿದ್ಯಾಲಯವೆನಿಸಿದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯಲ್ಲಿ ಈ ಸ್ಥಾನದಲ್ಲಿರಲು ಅಂದು ಸೈಂಟ್ ಜೋನ್ಸ್ ಶಾಲೆಯಲ್ಲಿ ನನಗೆ ದೊರೆತ ಉತ್ತಮ ಮಟ್ಟದ ಶಿಕ್ಷಣ, ಉನ್ನತ ಮಟ್ಟದ ಸಂಸ್ಕಾರವೇ ಕಾರಣವಾಗಿದೆ. ಹೀಗೆ ನನ್ನ ಬದುಕು ಬದಲಾಯಿಸಿದ ಈ ನನ್ನ ಶಾಲೆಯ ಬಗೆಗೆ ನೂರಾರು ಸವಿ ನೆನಪುಗಳಿವೆ. ಆ ನೆನಪುಗಳು ಮರುಕಳಿಸುವಾಗ ನನ್ನೊಳಗೆ ಏನೋ ಪುಳಕ.


  • Wilfred R  Dsouza

    ಹಿನ್ನೋಟದಲ್ಲಿ....



    " ನಾನು ಕಲಿಯಬೇಕು" ಎಂಬ ಉದ್ದೇಶದಿಂದ, ಹೆತ್ತವರು ನನ್ನನ್ನು, ಶಂಕರಪುರ ಸಂತ ಜೋನರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು. ಆದರೆ ಅವತ್ತು ನನಗೆ ಶಾಲೆ ಎಂದರೆ ಅಲರ್ಜಿ! ಶಾಲೆ ಎಂಬ ಪದವೂ ಕೇಳಲು ಅಸಹ್ಯ ವಾಗುತಿತ್ತು! ಆದರೂ ಬೇರೆನೂ ಉಪಾಯವಿಲ್ಲದೆ ನಾನು ಶಾಲೆಗೆ ಹೋಗಲೇ ಬೇಕಿತ್ತು. ಇಲ್ಲವಾದಲ್ಲಿ ಹೆತ್ತವರ ಬಯ್ಗುಳ ಮತ್ತು ಪೆಟ್ಟು ಗ್ಯಾರಂಟಿ ಇತ್ತು.!


    ಅಂದು ನಾನು ಮತ್ತು ನನ್ನ ತಾಯಿ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದೆವು! ಒದಿ ನಿಮಗೆ ಆಶ್ಚರ್ಯ ವಾಗಬಹುದು! ಹೌದು ನನಗೆ ಶಾಲೆಗೆ ಕಳುಹಿಸಲು ನನ್ನಮ್ಮ ನನ್ನ ಹಿಂದೇನೇ   ಬರಬೇಕಾಗಿತ್ತು! ಬೆತ್ತ ಹಿಡ್ಕೊಂಡು!!


     ಅ ಬೆತ್ತದ ಭಯದಿಂದಾಗಿ, ಕಣ್ಣೀರು ಹಾಕಿ, ಶಾಲೆಯ ಮೇಟ್ಟಲೇರುತ್ತಿದ್ದೆ...ಆವಾಗ ಶಿಕ್ಶಣ ನನಗೆ ಒಂದು ಶಿಕ್ಶೆಯಾಗಿ ಅನಿಸುತಿತ್ತು!


    ಹೇಗೋ ಕಷ್ಟದಲ್ಲಿ , ಆಲಸ್ಯದಿಂದ ಶಾಲೆಗೆ ಹೋಗುತ್ತಿದ್ದ ನಾನು, ಶಾಲೆಯಲ್ಲಿ ಇಡೀ ದಿವಸ, ಅಳುತ್ತಾ ಕೂತುತ್ತಿದ್ದೆ. ಮಕ್ಕಳಿಗೆ ಟೀಚರ್ ಪ್ರಶ್ನೆ ಕೇಳಿ, ತಪ್ಪು ಮಾಡಿದ್ದಲ್ಲಿ, ಶಿಕ್ಶೆ ಕೊಟ್ಟರೆ, ಮರುದಿನ ನನ್ನದು ಅದೇ ಗೋಳು- " ನಾನು ಶಾಲೆಗೆ ಹೋಗುವುದಿಲ್ಲ, ನಮ್ಮ ಶಿಕ್ಶಕರು ರಾಕ್ಶಸ ವಂಶದವರು, ಕಣ್ಣಿನಲ್ಲಿ ರಕ್ತ ಇಲ್ಲದವರು, ಎಂದು ಹೇಳಿ, ಮನೆಯಲ್ಲಿಯೇ ಕುಳ್ಳುವ ಪ್ಲ್ಯಾನ್‌ ಮಾಡುತ್ತಿದ್ದೆ. ಮನೆಯವರು ಶಿಕ್ಷಣದ ಮಹತ್ವವನ್ನು ತಿಳಿಸಿ, ನನ್ನನ್ನು ಪುಸಲಾಯಿಸಿ, ಶಾಲೆಗೆ ಬಿಟ್ಟರೂ , ನನ್ನ ಬುದ್ದಿಮಾತ್ರ ನಾಯಿ ಬಾಲದಂತೇಯೇ ಇತ್ತು.


    ಶಾಲೆಯಲ್ಲಿ ಉಳಿದ ಅನೇಕ ವಿದ್ಯಾರ್ಥಿಗಳು ಆಡಿ, ಕುಣಿದು, ಕಲಿತು ಬಹಳ ಸಂತೋಷದಿಂದ ಇರುತ್ತಿದ್ದರು. ಇನ್ನು ಕೆಲವರು ನನ್ನದೇ ಜಾತಿಗೇ ಸೇರಿದ್ದವು. ನಾನೇಣಿಸುತ್ತೇನೆ, ಅವಾಗ  ಶಾಲೆಯಲ್ಲಿ ಅಳುವ ವಿದ್ಯಾರ್ಥಿಗಳಲ್ಲಿ ನಾನೇ ಮುಖಂಡ ನಾಗಿರಬೇಕು ಅಂತ!


    ಒಂದನೇ ಕ್ಲಾಸಿನಲ್ಲಿ ಲಿಲ್ಲಿ ಟೀಚರ್ ನಮ್ಮ ಕ್ಲಾಸ್ ಟೀಚರ್ ಆಗಿದ್ದರು. ಅವರು ಕನ್ನಡದ ಅಕ್ಶರಮಾಲೆ " ಅ..ಆ...ಇ...ಈ..ಉ...ಊ..."  ಸಾವಿರ ಬಾರಿ ಹೇಳಿ, ಏನೆನೋ ಮಾಡಿ ನನ್ನ ತಲೆಗೆ ಹೊಕ್ಕಿಸುವ ಪ್ರಯತ್ನ ಮಾಡುತ್ತಿದ್ದರೂ, ನನ್ನ ತಲೆಗೆ ಮಾತ್ರ, ಬಂಡೆ ಮೇಲೆ ನೀರೆರೆದಂತೆ ಆಗುತ್ತಿತ್ತು. ಕೊನೆಗೆ ನನ್ನ ಬೆನ್ನಿಗೆ ಪೆಟ್ಟು ಬೀಳುವಾಗ, ನಾನು ' ಅ...ಹಾಯ್...ಆ...ಆಯ್ಯೊ...' ಎಂದು ಹೇಳುತ್ತಿದ್ದೆ. ಅಲ್ಲಲ್ಲಾ ನೋವಿನಿಂದ ಕೂಗುತ್ತಿದ್ದೆ.


    ನನಗೆ ಆವಾಗ ಬಿದ್ದ ಪೆಟ್ಟು ಎಷ್ಟೆಂದು ಲೆಕ್ಕ ಮಾಡಲಿಲ್ಲ. ಅಷ್ಟೇ ಅಲ್ಲ, ಲೆಕ್ಕ ಮಾಡುವಶ್ಟು ಪರಿಣತನು ನಾನಗಿರಲಿಲ್ಲ. ಅವಾಗ ಲೆಕ್ಕದಲ್ಲಿ ನಾನು ಪಕ್ಕ ಶೂನ್ಯ!


    ಎರಡನೇ ಪಿರೇಡು ಆದನಂತರ, ಒಂದಕ್ಕೆಗೆ( Washroom) ಕೊಡುವ ಐದು ನಿಮಿಶದ ಬಿಡುವಿನಲ್ಲಿ ನಾನು ಹೇಳದೇ ಕೇಳದೇ ಪಣಾಂದೇ ಪಾರ್....ಮನೆಕಡೆಗೆ!


    ಹಲವು ಬಾರಿ ಈ ಪ್ರಯತ್ನದಲ್ಲಿ ನಾನು ಯಶಸ್ವಿ ಕಾಣುತಿರಲಿಲ್ಲ. ಮನೆಕಡೆ ಜಾರಲು ನೋಡುವಾಗ, ವಿಶಯ ಅರಿತ ಕೆಲವರು, ನನ್ನನ್ನು ಹಿಡಿದು ಟೀಚರ್ ಕೈಗೆ ಒಪ್ಪಿಸುತ್ತಿದ್ದರು. ಟೀಚರ್ ಕೈಯಲ್ಲಿರುವ ಬೆತ್ತ ನೋಡಿ, ಅವರಿಂದಲೂ ಬಿಡಿಸಿ ಕೊಳ್ಳುವ ಪ್ರಯತ್ನ ಮಾಡಿದ್ದುಂಟು. ಅವರು ಸಿಟ್ಟಿನಿಂದ ನನ್ನನ್ನು ಸರರನೇ ಕ್ಲಾಸಿಗೆ ಎಳೆದುಕೊಂಡು ಹೋಗುವಾಗ, ನನ್ನ ಸಹಪಾಠಿಗಳು ನನಗೆ ಗೇಲಿ ಮಾಡುತ್ತಿದ್ದರು. ನನ್ನ ಕಣ್ಣಿನಲ್ಲಿ ಕಣ್ಣಿರುವುದರಿಂದ, ಅವರ ಮುಖಗಳು ಸ್ವಶ್ಟವಾಗಿ ಕಾಣುತ್ತಿರಲಿಲ್ಲ.


    ಒಂದೇರಡು ಬಾರಿ ಇಂತಹ ಸಂದರ್ಭದಲ್ಲಿ ನಾನು ನೇರ ಹತ್ತಿರದ ಇಗರ್ಜಿಗೆ ಹೋಗಿ, ಅಲ್ಲಿ ಮೂಲೆಯಲ್ಲಿ ಅವಿತು, ಮೂರನೇ ಪಿರೇಡು ಪ್ರಾರಂಭವಾಗುವಾಗ, ಇಗರ್ಜಿಯ ತೋಟದ ಮುಖಾಂತರ, ಅವಸರದ ಲಗ್ಗೆ ಇಟ್ಟು ಮನೆಗೆ ಧಾವಿಸುತ್ತಿದ್ದೆ. ಮನೆಯ ಹತ್ತಿರದ ಕಾಡಿನಲ್ಲಿ ಅವಿತುಕೂತು ಶಾಲೆ ಬಿಟ್ಟ ನಂತರ ನನ್ನ ದೊಡ್ಡಕ್ಕ ಮನೆಗೆ ಬರುವಾಗ, ಅವಳ ಹಿಂದೆ ನಾನು ಮನೆ ಸೇರುತ್ತಿದ್ದೆ!!


    ಒಮ್ಮೆ ನನ್ನ ಕಾರ್ಬಾರು ತಿಳಿದ ಅಕ್ಕ, ತಾಯಿಗೆ ದೂರು ನೀಡಿದ್ದಳು. ನಂತರ ನನಗೆ ತಾಯಿಯ ಪೆಟ್ಟು ಮತ್ತು ಬಯ್ಗುಳ ಒಟ್ಟಿಗೆ ಸಿಕ್ಕಿತ್ತು...ಸಜ್ಜಿಗೆ ಒಟ್ಟಿಗೆ ಬಜಿಲ್ ತಿಂದ ಹಾಗೆ.


    ಈ ನನ್ನ ದುರಾಭ್ಯಾಸ ಸುಮಾರು ಎರಡನೇ ತರಗತಿ ವರೇಗೆ ಮುಂದುವರಿಸಲ್ಪಟ್ಟಿತ್ತು.


     ಮತ್ತೆ ಹೇಗೊ? ಯಾಕೋ...ಮೂರನೇ ಕ್ಲಾಸಿಗೇ ಬಂದ ನಂತರ, ನಾನು ನನ್ನಶ್ಟಕ್ಕೆ ಸುದಾರಿಸಲ್ಪಟ್ಟೆ! ನಂತರ ಅನೇಕ ಸಹಪಾಠಿಗಳ ಗೆಳೆತನ ಬೆಳೆಸಲ್ಪಟ್ಟೆ. ತಾಯಿಗೆ ಬೆತ್ತ ಹಿಡಿದು ನನ್ನ ಹಿಂದೆ ಬರುವ ಕೆಲಸ ತಪ್ಪಿತು. ಮೂರನೇ ತರಗತಿಯಿಂದ, ಶಾಲೆಯಲ್ಲಿ ಕಲಿತು, ಆಡಿ ಕುಣಿಯಲು ಆಸಕ್ತಿ ಹುಟ್ಟಿತು. ಹೌದು ಅಂದಿನಿಂದ ನನಗೆ ಶಾಲೆಯಲ್ಲಿ ಇರಲು ಸಂತೋಷ ವಾಯಿತು.

    ಆವಾಗ ನಾನು ಸಂಗೀತದಲ್ಲಿ ಹುಷಾರಿದ್ದೆ. ಅನೇಕ ಬಹುಮಾನಗಳು ನನಗೆ ಬಂದಿತ್ತು. 


    ಒಂದು ವೇಳೆ ಆ ದಿನಗಳಲ್ಲಿ ನನ್ನ ಹೆತ್ತವರು ನಿನಗೆ ಶಾಲೆಯೇ ಬೇಡ, ಮನೆಯಲ್ಲಿ ಕುತ್ಕೊಂಡು ಸೆಗಣಿ ಹೆಕ್ಕಿಕೊ ಅಂದರೆ, ಅಥವಾ ಶಾಲೆಯಲ್ಲಿ ಯಾವಾಗಲೂ ಅಳುವುದನ್ನು ನೋಡಿ, ಶಿಕ್ಶಕರು ನನ್ನನ್ನು Permanent ಆಗಿ ಮನೆಗೆ ಕಳುಹಿಸಿದ್ದರೇ, ನಾನು ಇವತ್ತು " ಅನಕ್ಶರಸ್ಥ" ಸಂಘದ ಅಜೀವ ಸದಸ್ಯನಾಗಿರುತ್ತಿದ್ದೆ!!


    ನನ್ನ ಶಿಕ್ಶಣ ಪ್ರಯಾಣದಲ್ಲಿ ನನಗೆ ಸಹಕರಿಸಿದ ಎಲ್ಲಾ ಶಿಕ್ಶಣ ಪ್ರಮುಖರಿಗೆ, ಹಾಗೂ ನನ್ನ ಎಲ್ಲಾ ಸಹಪಾಠಿಗಳಿಗೆ ವಂದನೆಗಳು.


    ವಿಲ್ಪ್ರೆಡ್ ಆರ್ ಪಾಂಗ್ಳಾ